ದೇವಾಡಿಗ ಸಂಘ ಮುಂಬಯಿ ಪ್ರಾದೇಶಿಕ ಸಮನ್ವಯ ಸಮಿತಿ ಡೊಂಬಿವಲಿ ವಲಯದ ಆಟಿಡೊಂಜಿ ದಿನ ಹಾಗೂ ವಿದ್ಯಾರ್ಥಿಗಳಿಗೆ ಪರಿಕರ (ಪುಸ್ತಕ ವಿತರಣೆ) | DSM

ದೇವಾಡಿಗ ಸಂಘ ಮುಂಬಯಿ ಪ್ರಾದೇಶಿಕ ಸಮನ್ವಯ ಸಮಿತಿ ಡೊಂಬಿವಲಿ ವಲಯದ ಆಟಿಡೊಂಜಿ ದಿನ ಹಾಗೂ ವಿದ್ಯಾರ್ಥಿಗಳಿಗೆ ಪರಿಕರ (ಪುಸ್ತಕ ವಿತರಣೆ)

Featured Image

ದೇವಾಡಿಗ ಸಂಘ ಮುಂಬೈ ಪ್ರಾದೇಶಿಕ ಸಮನ್ವಯ ಸಮಿತಿ ಡೊಂಬಿವಲಿ ವಲಯದ ಆಟಿಡೊಂಜಿ ದಿನ ಹಾಗೂ ವಿದ್ಯಾರ್ಥಿಗಳಿಗೆ ಪರಿಕರ (ಪುಸ್ತಕ ವಿತರಣೆ) ಕಾರ್ಯಕ್ರಮವು ದಿನಾಂಕ 08/08/2026 ರಂದು ಡೊಂಬಿವಲಿ ಪಶ್ಚಿಮದ ರೈಲ್ವೆ ನಿಲ್ದಾಣದ ಎದುರಿಗಿರುವ ಪ್ರೀತಿ ಸಭಾಗೃಹದಲ್ಲಿ ಬಹಳ ವಿಜೃಂಭಣೆಯಿಂದ ಜರಗಿತು.

ಕಾರ್ಯಕ್ರಮದ ಆರಂಭದಲ್ಲಿ ಸಮಾಜದ ಮಕ್ಕಳು ಹಾಗೂ ಮಹಿಳಾ ವಿಭಾಗದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ನಂತರ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಅಂದಿನ ಸಭಾಧ್ಯಕ್ಷರಾದ ಶ್ರೀಯುತ ಸುರೇಶ್ ದೇವಾಡಿಗರು, ದೇವಾಡಿಗ ಸಂಘ ಮುಂಬಯಿಯ ಅಧ್ಯಕ್ಷರಾದ ಶ್ರೀಯುತ ರವಿ ದೇವಾಡಿಗರು, ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಮಾಜ ಸೇವಕ ಶ್ರೀಯುತ ದೇವಿದಾಸ್ ಲೋಕಯ್ಯ ಕುಲಾಲ್, ಹೋಟೆಲ್ ಉದ್ಯಮಿ ಹಾಗೂ ಶ್ರೀ ಜಗದಂಬಾ ಮಂದಿರದ ಗೌರವಾಧ್ಯಕ್ಷರಾದ ಶ್ರೀ ಹರಿಶ್ಚಂದ್ರ ಶೆಟ್ಟಿ, ದೇವಾಡಿಗ ಸಂಘ ಮುಂಬೈನ ಗೌರವ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಪದ್ಮನಾಭ ದೇವಾಡಿಗರು, ದೇವಾಡಿಗ ಸಂಘ ಮುಂಬಯಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರಾದ ಶ್ರೀಮತಿ ಪ್ರಮೀಳಾ ವಿಜಯ ಶೇರಿಗಾರ್ , ಡೊಂಬಿವಲಿ ವಲಯದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರಾದ ಶ್ರೀಮತಿ ನಿರ್ಮಲಾ ರಾಮಚಂದ್ರ ದೇವಾಡಿಗ ಹಾಗೂ ಯುವ ವಿಭಾಗದ ಕಾರ್ಯಾಧ್ಯಕ್ಷರಾದ ಶ್ರೀಯುತ ವಿಗ್ನೇಶ್ ದೇವಾಡಿಗ ಅವರನ್ನು ವೇದಿಕೆಗೆ ಆತ್ಮೀಯವಾಗಿ ಆಹ್ವಾನಿಸಿ, ಪುಷ್ಪಗುಚ್ಛ ನೀಡಿ ಗೌರವಪೂರ್ವಕವಾಗಿ ಸ್ವಾಗತಿಸಲಾಯಿತು.

ವಲಯದ ಯುವ ವಿಭಾಗದ ಕುಮಾರಿ ಮನೀಷಾ ಶೇಖರ್ ದೇವಾಡಿಗ ಹಾಗೂ ಕುಮಾರಿ ಕವನಾ ಶಿವರಾಮ ದೇವಾಡಿಗ ಅವರ ಪ್ರಾರ್ಥನೆಯೊಂದಿಗೆ ವೇದಿಕೆಯಲ್ಲಿದ್ದ ಗಣ್ಯರೆಲ್ಲರೂ ಸೇರಿ ದೀಪ ಪ್ರಜ್ವಲನೆ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ವಿಧಿವತ್ತಾಗಿ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡೊಂಬಿವಲಿ ಪೂರ್ವದಲ್ಲಿ ಇರುವ ಮಂಜುನಾಥ ವಿದ್ಯಾಲಯದ ಕಾರ್ಯಾಧ್ಯಕ್ಷರಾದ ಹಾಗೂ ಉತ್ತಮ ಸಮಾಜ ಸೇವಕರೂ ಆದ ಶ್ರೀಯುತ ದೇವದಾಸ್ ಲೋಕಯ್ಯ ಕುಲಾಲ್ ಮತ್ತು ಹೋಟೆಲ್ ಉದ್ಯಮಿ ಹಾಗೂ ಡೊಂಬಿವಲಿ ಪಶ್ಚಿಮದಲ್ಲಿರುವ ಶ್ರೀ ಜಗದಂಬಾ ದೇವಸ್ಥಾನದ ಗೌರವಾಧ್ಯಕ್ಷರಾದ ಶ್ರೀಯುತ ಹರಿಶ್ಚಂದ್ರ ಶೆಟ್ಟಿ ಅವರನ್ನು ದೇವಾಡಿಗ ಸಂಘ ಮುಂಬೈನ ಅಧ್ಯಕ್ಷರಾದ ಶ್ರೀಯುತ ರವಿ ದೇವಾಡಿಗರು ಹಾಗೂ ವೇದಿಕೆಯಲ್ಲಿದ್ದ ಗಣ್ಯರು ಮತ್ತು ವಲಯದ ಸಮಿತಿಯ ಸದಸ್ಯರು ಒಟ್ಟಾಗಿ ಶಾಲು ಹೊದಿಸಿ, ಪುಷ್ಪಗುಚ್ಛ ನೀಡಿ ಗೌರವಪೂರ್ವಕವಾಗಿ ಸನ್ಮಾನಿಸಿದರು.

ಸಮಾಜದ ಗಣ್ಯ ವ್ಯಕ್ತಿಗಳನ್ನು ಗೌರವಿಸುವ ಈ ಸಂದರ್ಭದಲ್ಲಿ ಅವರ ಸಮಾಜ ಸೇವೆ ಹಾಗೂ ಸಮುದಾಯದ ಅಭಿವೃದ್ಧಿಗೆ ನೀಡುತ್ತಿರುವ ಕೊಡುಗೆಯನ್ನು ಸ್ಮರಿಸಿ ಅಭಿನಂದಿಸಲಾಯಿತು. ಈ ಸನ್ಮಾನವು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದಿತು.

ಸನ್ಮಾನಿತ ಶ್ರೀಯುತ ದೇವದಾಸ್ ಲೋಕಯ್ಯ ಕುಲಾಲ್ ಅವರು ಸನ್ಮಾನ ಸ್ವೀಕರಿಸಿ ಸಭೆಯನ್ನು ಉದ್ದೇಶಿಸಿ ನೀವು ಕೊಟ್ಟ ಸನ್ಮಾನಕ್ಕೆ ನಾನು ಸದಾ ಚಿರಋಣಿ. ನೂರ ಒಂದು ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ದೇವಾಡಿಗ ಸಂಘ ಮುಂಬೈನ ಕಾರ್ಯವೈಖರಿ ಹಾಗೂ ಸಾಧನೆಗಳನ್ನು ಸ್ಮರಿಸಿದ ಅವರು, ಈ ಮಹಾನ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಹಿರಿಯರನ್ನು ಗೌರವಪೂರ್ವಕವಾಗಿ ನೆನೆದರು. ಸಂಘ-ಸಂಸ್ಥೆಯಲ್ಲಿ ಸೇವೆ ಸಲ್ಲಿಸುವುದು ಒಂದು ಪುಣ್ಯದ ಕಾರ್ಯವಾಗಿದ್ದು, ಸಮಾಜದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡುವ ಅವಕಾಶ ಎಲ್ಲರಿಗೂ ದೊರೆಯಬೇಕು ಎಂದು ತಿಳಿಸಿದರು.

ಸಮಾಜ ಬಾಂಧವರನ್ನು ಒಂದೆಡೆ ಸೇರಿಸಿ, ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸಹಕಾರವನ್ನು ಬೆಳೆಸುವುದರ ಜೊತೆಗೆ, ನಮ್ಮ ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಅವರ ಸಾಧನೆಗಳನ್ನು ಪ್ರೋತ್ಸಾಹಿಸುವುದು ಅತ್ಯಂತ ಸಂತೋಷದ ವಿಷಯವಾಗಿದೆ ಎಂದು ಅವರು ಹೇಳಿದರು. ವಿಶೇಷವಾಗಿ ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನೆ ಮಾಡಿದ ಮಕ್ಕಳನ್ನು ಗುರುತಿಸಿ ಸನ್ಮಾನಿಸುವ ಮೂಲಕ ಅವರಲ್ಲಿ ಮತ್ತಷ್ಟು ಆತ್ಮವಿಶ್ವಾಸ ಮೂಡಿಸುವ ಕಾರ್ಯವನ್ನು ಶ್ಲಾಘಿಸಿದರು.

ಆಟಿ ತಿಂಗಳ ಹಿಂದಿನ ಜೀವನದ ಸ್ಥಿತಿಗತಿಗಳನ್ನು ಹಾಗೂ ಅಂದಿನ ಸಂಪ್ರದಾಯ, ಸಂಸ್ಕೃತಿ ಮತ್ತು ಜೀವನಶೈಲಿಯನ್ನು ಸ್ಮರಿಸಿದ ಅವರು, ನಮ್ಮ ಹಿರಿಯರು ನಮಗೆ ಬಿಟ್ಟುಹೋದ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

ಅದೇ ರೀತಿ, ದೇವಾಡಿಗ ಸಂಘವು ಇತರ ಸಂಘ-ಸಂಸ್ಥೆಗಳೊಂದಿಗೆ ಸದಾ ಪ್ರೀತಿ, ಆತ್ಮೀಯತೆ ಮತ್ತು ಅನ್ಯೋನ್ಯತೆಯ ಸಂಬಂಧವನ್ನು ಹೊಂದಿದ್ದು, ಪರಸ್ಪರರ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡು ಬಂದಿದೆ. ಈ ಸೌಹಾರ್ದತೆ ಮತ್ತು ಅನ್ಯೋನ್ಯತೆ ಮುಂದಿನ ದಿನಗಳಲ್ಲಿಯೂ ಇದೇ ರೀತಿ ಮುಂದುವರಿಯಲಿ ಎಂದು ಅವರು ಹಾರೈಸಿದರು.


ದೇವಾಡಿಗ ಸಂಘ ಮುಂಬೈಯ ಅಧ್ಯಕ್ಷರಾದ ಶ್ರೀ ರವಿ ದೇವಾಡಿಗರು ತಮ್ಮ ಭಾಷಣದಲ್ಲಿ, ಸಂಘದ ವಲಯಗಳನ್ನು ಸ್ಥಾಪಿಸಿರುವ ಉದ್ದೇಶ ಹಾಗೂ ಅದರ ಮಹತ್ವವನ್ನು ಸಭೆಗೆ ವಿವರಿಸಿದರು. ವಲಯದ ಸದಸ್ಯರೆಲ್ಲರೂ ಒಗ್ಗಟ್ಟಿನಿಂದ ಸೇರಿ ವಿವಿಧ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುತ್ತಿರುವುದನ್ನು ಅಭಿನಂದಿಸಿದರು. ಇದೇ ಹುಮ್ಮಸ್ಸು, ಒಗ್ಗಟ್ಟು ಮತ್ತು ಸಹಕಾರದೊಂದಿಗೆ ಮುಂದೆಯೂ ಸಂಘದ ಅಭಿವೃದ್ಧಿಗಾಗಿ ಎಲ್ಲರೂ ಶ್ರಮಿಸಬೇಕೆಂದು ವಿನಂತಿಸಿದರು.


ದೇವಾಡಿಗ ಸಂಘ ಮುಂಬೈನ ಗೌರವ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಪದ್ಮನಾಭ ದೇವಾಡಿಗರು ತಮ್ಮ ಮಾತಿನಲ್ಲಿ, ಸಂಘದ ವಾರ್ಷಿಕ ಮಹಾಸಭೆ ನಡೆಯಲಿದ್ದು, ಎಲ್ಲಾ ಸದಸ್ಯರು ಈ ಸಭೆಯಲ್ಲಿ ಕಡ್ಡಾಯವಾಗಿ ಭಾಗವಹಿಸಿ, ತಮ್ಮ ಅಮೂಲ್ಯ ಸಲಹೆ-ಸಹಕಾರವನ್ನು ನೀಡಬೇಕೆಂದು ಮನವಿ ಮಾಡಿದರು. ಸಂಘದ ಅಭಿವೃದ್ಧಿ ಹಾಗೂ ಮುಂದಿನ ಕಾರ್ಯಚಟುವಟಿಕೆಗಳಿಗೆ ಸದಸ್ಯರ ಉಪಸ್ಥಿತಿ ಮತ್ತು ಸಹಕಾರ ಅತ್ಯಂತ ಅಗತ್ಯವಾಗಿದೆ ಎಂದು ಅವರು ತಿಳಿಸಿದರು.

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರಾದ ಶ್ರೀಮತಿ ಪ್ರಮಿಳಾ ವಿಜಯ್ ಶೇರಿಗಾರ್ ಅವರು ಆಟಿ ತಿಂಗಳ ವಿಶೇಷತೆ ಹಾಗೂ ಅದರ ಸಾಂಸ್ಕೃತಿಕ ಮಹತ್ವವನ್ನು ಸಭಿಕರಿಗೆ ವಿವರಿಸಿದರು.
ಅದೇ ರೀತಿ, ವಲಯದ ಯುವ ನೇತಾರರಾದ ಶ್ರೀಯುತ ವಿಗ್ನೇಶ್ ದೇವಾಡಿಗರು, ವಲಯದ ಯುವ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾದ ಹಾಗೂ ಮುಂದಿನ ದಿನಗಳಲ್ಲಿ ಆಯೋಜಿಸಲಿರುವ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ಸಭೆಗೆ ನೀಡಿದರು.


ಈ ವರ್ಷದ ನಮ್ಮ ವಲಯದ ವಿದ್ಯಾರ್ಥಿಗಳಿಗೆ ಉಚಿತವಾಗಿ ಲೇಖನ ಸಾಮಗ್ರಿಗಳು ಹಾಗೂ ನೋಟ್‌ಬುಕ್‌ಗಳನ್ನು ನೀಡಿ, ಅವರ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಮತ್ತು ಸಹಕಾರ ನೀಡಿದ ನಮ್ಮ ವಲಯದ ಸದಸ್ಯರಾದ ಶ್ರೀಮತಿ ಪುಷ್ಪಾ ಸೀತಾರಾಮ್ ದೇವಾಡಿಗರವರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅವರು ನೀಡಿದ ಈ ಅಮೂಲ್ಯ ಸಹಕಾರಕ್ಕಾಗಿ ಸಭೆಯ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಲಾಯಿತು.


ವಲಯದ ಮಹಿಳಾ ಕಾರ್ಯಾಧ್ಯಕ್ಷರಾದ ಶ್ರೀಮತಿ ನಿರ್ಮಲಾ ರಾಮಚಂದ್ರ ದೇವಾಡಿಗರು ವಲಯದ ಮಹಿಳೆಯರು ಹಾಗೂ ಆಗಮಿಸಿದ ಅತಿಥಿಗಳನ್ನು ಪುಷ್ಪಗುಚ್ಛ ನೀಡಿ ಆತ್ಮೀಯವಾಗಿ ಗೌರವಿಸಿದರು.
ಮನೆಯಲ್ಲಿಯೇ ತಯಾರಿಸಿದ ಆಟಿ ತಿಂಗಳ ವಿವಿಧ ಸಾಂಪ್ರದಾಯಿಕ ಅಡುಗೆ ಹಾಗೂ ತಿಂಡಿಗಳನ್ನು ತಯಾರಿಸಿ ತಂದ ಮಹಿಳೆಯರನ್ನು ವಿಶೇಷವಾಗಿ ಪುರಸ್ಕರಿಸಲಾಯಿತು. ಅಲ್ಲದೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಮಕ್ಕಳು ಹಾಗೂ ಮಹಿಳೆಯರಿಗೆ ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಲಾಯಿತು. ಈ ಮೂಲಕ ಮಹಿಳೆಯರ ಪ್ರತಿಭೆ, ಸೃಜನಶೀಲತೆ ಹಾಗೂ ಸಾಂಸ್ಕೃತಿಕ ಆಸಕ್ತಿಯನ್ನು ಪ್ರೋತ್ಸಾಹಿಸಲಾಯಿತು.

ಸಭೆಯಲ್ಲಿ ಸಾಯಿನಾಥ ಮಿತ್ರ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ಮೋಹನ್ ಸಾಲ್ಯಾನ್, ಹೋಟೆಲ್ ಉದ್ಯಮಿ ಶ್ರೀಯುತ ಲಕ್ಷ್ಮಣ್ ಪೂಜಾರಿ, ದೇವಾಡಿಗ ಸಂಘ ಮುಂಬೈನ ಜೊತೆ ಕಾರ್ಯದರ್ಶಿಗಳಾದ ಶ್ರೀಯುತ ನಿತೇಶ್ ದೇವಾಡಿಗ ಹಾಗೂ ಶ್ರೀಮತಿ ಸಚಿತಾ ಎಸ್. ಸಿರಿಯಾನ್, ಖಜಾಂಚಿಗಳಾದ ಶ್ರೀಯುತ ಸುರೇಶ್ ದೇವಾಡಿಗ ಹಾಗೂ ಶ್ರೀಯುತ ಜಯ ಎಲ್. ದೇವಾಡಿಗ, ಮೆಡಿಕಲ್ ಗೈಡೆನ್ಸ್ ಸೆಂಟರ್‌ನ ಕಾರ್ಯಾಧ್ಯಕ್ಷರಾದ ಶ್ರೀಯುತ ಸುಧಾಕರ್ ಎಲ್ಲೂರ್, ಸೋಷಿಯಲ್ ಆ್ಯಂಡ್ ಕಲ್ಚರಲ್ ಕಾರ್ಯದರ್ಶಿಯಾದ ಶ್ರೀಮತಿ ಜಯಂತಿ ಎಂ. ದೇವಾಡಿಗ, CSR ಕೋ-ಆರ್ಡಿನೇಟರ್ ಶ್ರೀಯುತ ಹೆಮನಾಥ್ ದೇವಾಡಿಗ, LCC ಕೋ-ಆರ್ಡಿನೇಟರ್ ಶ್ರೀಯುತ ಕಿರಣ್ ದೇವಾಡಿಗ, ಇಂಟರ್ನಲ್ ಆಡಿಟರ್ ಶ್ರೀ ಉಮೇಶ್ ದೇವಾಡಿಗ, ಮಹಿಳಾ ವಿಭಾಗದ ಕಾರ್ಯದರ್ಶಿಗಳಾದ ಶ್ರೀಮತಿ ಸುರೇಖಾ ದೇವಾಡಿಗ ಹಾಗೂ ಶ್ರೀಮತಿ ಪ್ರತಿಭಾ ಜಿ. ದೇವಾಡಿಗ, ಸದಸ್ಯರಾದ ಶ್ರೀಯುತ ರಾಮಣ್ಣ ದೇವಾಡಿಗ, ಯೂತ್ ವಿಂಗ್ ವೈಸ್ ಚೇರ್ಮನ್ ಶ್ರೀಯುತ ವಿನೀಶ್ ಎಸ್. ದೇವಾಡಿಗ ಸೇರಿದಂತೆ ವಲಯದ ಎಲ್ಲಾ ಸದಸ್ಯರು ಹಾಗೂ ಬಂಧು-ಬಳಗದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಭಾಧ್ಯಕ್ಷರಾದ ಶ್ರೀ ಸುರೇಶ್ ದೇವಾಡಿಗರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ವೇದಿಕೆಯಲ್ಲಿದ್ದ ಗಣ್ಯ ಅತಿಥಿಗಳು, ಸಮಿತಿಯ ಪದಾಧಿಕಾರಿಗಳು, ವಲಯದ ಬಂಧು-ಬಳಗದವರು, ಪ್ರಧಾನ ಕಾರ್ಯಾಲಯದ ಪದಾಧಿಕಾರಿಗಳು ಹಾಗೂ ವಲಯದ ವಿವಿಧ ಸಂಘ-ಸಂಸ್ಥೆಗಳಿಂದ ಆಗಮಿಸಿದ ಪದಾಧಿಕಾರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.
ಅದೇ ಸಂದರ್ಭದಲ್ಲಿ ಶೈಕ್ಷಣಿಕ ವರ್ಷ 2025–26ರಲ್ಲಿ ಎಸ್ಎಸ್ಎಲ್ಸಿ ಹಾಗೂ ಎಚ್‌ಎಸ್‌ಸಿ ಪರೀಕ್ಷೆಗಳಲ್ಲಿ ಶೇ. 80ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಸನ್ಮಾನಿಸಲಾಯಿತು. ವಲಯದ ಎಲ್ಲಾ ವಿದ್ಯಾರ್ಥಿಗಳಿಗೆ ಗಣ್ಯ ಅತಿಥಿಗಳೊಂದಿಗೆ ಸೇರಿ ಪುಸ್ತಕಗಳನ್ನು ವಿತರಿಸಲಾಯಿತು.

ಈ ಎಲ್ಲಾ ಕಾರ್ಯಕ್ರಮಗಳ ಯಶಸ್ಸಿಗೆ ಶ್ರೀಯುತ ರಾಮಚಂದ್ರ ದೇವಾಡಿಗ, ಶ್ರೀಯುತ ಹೇಮಾನಂದ್ ದೇವಾಡಿಗ, ಶ್ರೀಯುತ ಅಶೋಕ್ ದೇವಾಡಿಗ, ಶ್ರೀಯುತ ಮಂಜುನಾಥ ದೇವಾಡಿಗ, ಶ್ರೀಯುತ ವಿಜಯ ಕೆ. ದೇವಾಡಿಗ, ಶ್ರೀಯುತ ದಿನೇಶ್ ದೇವಾಡಿಗ, ಶ್ರೀಯುತ ರಾಜೇಶ್ ರಾವ್, ಶ್ರೀಮತಿ ಜಯತಾಕ್ಷಿ ವಿಜಯ ದೇವಾಡಿಗ, ಶ್ರೀಮತಿ ಪದ್ಮಲತಾ ರಾಜು ಮೈಲಿ, ಶ್ರೀಮತಿ ಮೀನಾ ಶಂಕರ್ ದೇವಾಡಿಗ, ಶ್ರೀಮತಿ ನಳಿನಿ ಎಸ್. ದೇವಾಡಿಗ, ಶ್ರೀಯುತ ಜಯಂತ್ ದೇವಾಡಿಗ, ಶ್ರೀಯುತ ಮನೋಹರ್ ಪಡುಬಿದ್ರಿ, ಶ್ರೀಯುತ ಆಕಾಶ್ ದೇವಾಡಿಗ ಹಾಗೂ ಶ್ರೀಯುತ ಶಶಿಧರ್ ದೇವಾಡಿಗರು ತಮ್ಮ ಅಮೂಲ್ಯ ಸಹಕಾರವನ್ನು ನೀಡಿದರು.

ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ವಿಶಾಲಾ ಹೇಮಾನಂದ್ ದೇವಾಡಿಗರು ಅಚ್ಚುಕಟ್ಟಾಗಿ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ನಿರೂಪಣೆಯನ್ನು ವಲಯದ ಕಾರ್ಯದರ್ಶಿಗಳಾದ ಶ್ರೀಯುತ ಕೃಷ್ಣ ದೇವಾಡಿಗರು ನಿರ್ವಹಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ವಲಯದ ಜೊತೆ ಕಾರ್ಯಾಧ್ಯಕ್ಷರಾದ ಶ್ರೀಯುತ ವಿಜಯ ದೇವಾಡಿಗರು ಧನ್ಯವಾದ ಸಮರ್ಪಿಸಿದರು. ನಂತರ ಎಲ್ಲರೂ ಪ್ರೀತಿ ಭೋಜನವನ್ನು ಸವಿಯುವುದರೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ಹಾಗೂ ಸಂತೋಷಭರಿತವಾಗಿ ಮುಕ್ತಾಯಗೊಂಡಿತು.