ದೇವಾಡಿಗ ಸಂಘ ಮುಂಬಯಿ ಮತ್ತು ಬಿ.ಜೆ.ಪಿ ಸೌತ್ ಇಂಡಿಯಾ ಸೆಲ್ ಇವರಿಂದ ರಕ್ತದಾನ ಶಿಬಿರ:

ದೇವಾಡಿಗ ಸಂಘ ಮುಂಬಯಿ ಮತ್ತು ಬಿ.ಜೆ.ಪಿ ಸೌತ್ ಇಂಡಿಯಾ ಸೆಲ್ ಇವರಿಂದ ರಕ್ತದಾನ ಶಿಬಿರ: ರಕ್ತದಾನ ಮಾಡಿ ಪ್ರಾಣ ಉಳಿಸುವುದು ಶ್ರೇಷ್ಠಕಾರ್ಯ - ಸಂಜೀವ್ ನಾಯ್ಕ್

   ನವಿಮುಂಬಯಿ ಜೂನ್ ೧೮: ರಕ್ತ ದಾನ ಶ್ರೇಷ್ಠ ದಾನ. ರಕ್ತದಾನ ಮಾಡಿ ಇನ್ನೊಬ್ಬರ ಪ್ರಾಣ ಉಳಿಸುವುದಕ್ಕಿಂತ ಶ್ರೇಷ್ಠವಾದ ಸಮಾಜ ಸೇವೆ ಬೇರೊಂದಿಲ್ಲ. ಆದಷ್ಟು ಜನರು ತಾವಾಗಿ ಮುಂದೆ ಬಂದು ರಕ್ತದಾನ ಮಾಡಬೇಕು ಎಂಬುದಾಗಿ ನವಿ ಮುಂಬಯಿಯ ಮಾಜಿ ಸಂಸದರಾದ ಶ್ರೀ ಸಂಜೀವ್ ಗಣೇಶ್ ನಾಯ್ಕ್ ಇವರು ಹೇಳಿದರು.

ದೇವಾಡಿಗ ಸಂಘ ಮುಂಬಯಿ ಮತ್ತು ಬಿ.ಜೆ.ಪಿ ಸೌತ್ ಇಂಡಿಯಾ ಸೆಲ್ ಇಲ್ಲಿಯ ಕಮೊಥೆಯಲ್ಲಿನ ಮಹಾತ್ಮಾ ಗಾಂಧಿ ಮೆಮೋರಿಯಲ್ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಇದರ ಸಹಾಯದೊಂದಿಗೆ ಇಂದು ನೆರೂಲ್ ಇಲ್ಲಿಯ ದೇವಾಡಿಗ ಭವನದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಶ್ರೀ ಸಂಜೀವ್ ನಾಯ್ಕ್ ಹೀಗೆ ನುಡಿದರು. ಹೆಚ್ಚಿನವರಿಗೆ ರಕ್ತ ದಾನ ಮಾಡಿದರೆ ತನಗೆ ಏನಾಗುತ್ತೋ ಎನ್ನುವ ಭಯ ಇರುತ್ತದೆ. ಆದರೆ ರಕ್ತ ದಾನ ಮಾಡಿದುದರಿಂದ ನಮ್ಮ ಶರೀರದಲ್ಲಿ ರಕ್ತ ಶುದ್ಧೀಕರಣಗೊಂಡು ಅರೋಗ್ಯ ಚೆನ್ನಾಗುತ್ತದೆ. ರಕ್ತದಾನ ಮಾಡಿದವರ ಅರೋಗ್ಯ ಚೆನ್ನಾಗಿರುತ್ತದೆ ಮತ್ತು ಗಾಬರಿಯಾಗಬೇಕಾದ ಅವಶ್ಯಕತೆ ಇಲ್ಲ " ಎಂದು ಹೇಳಿದರು. ದೇವಾಡಿಗ ಸಂಘದ ಚಟುವಟಿಕೆ ಮತ್ತು ಕಾರ್ಯಗಳನ್ನು ಶ್ಲಾಘಿಸಿದ ಅವರು ತಮ್ಮ ಸಂಘದಿಂದ ಉತ್ತಮ ಕಾರ್ಯ ಆಗುತ್ತಿದ್ದು ಅದನ್ನು ಮುಂದುವರಿಸಲು ನಾವು ಸದಾ ಸಹಕಾರಿಯಾಗಿದ್ದೇವೆ ಎಂದರು. ನವಿ ಮುಂಬಯಿ ಪಟ್ಟಣದಲ್ಲಿ ದಕ್ಷಿಣ ಭಾರತೀಯ ಜನತೆಗೆ ಇಲ್ಲಿಯ ಆಡಳಿತ ಉತ್ತಮ ಸ್ಪಂದನೆ ನೀಡಿ ತುಂಬಾ ಸಹಕಾರ ಮಾಡಿದೆ. ದಕ್ಷಿಣ ಭಾರತೀಯರು ಉತ್ತಮ ಸಂಸ್ಕಾರದ ನಾಗರೀಕರಾಗಿದ್ದು ನವಿ ಮುಂಬಯಿಯಾ ಬೆಳವಣಿಗೆಯಲ್ಲಿ ಸಿಂಹಪಾಲು ವಹಿಸಿದ್ದಾರೆ. ಇಲ್ಲಿಯ ಜನರ ಪ್ರಸಿದ್ಧ ನೇತರಾದ ಶ್ರೀ ಗಣೇಶ್ ನಾಯ್ಕ್ ಇವರು ಇಲ್ಲಿಯ ವಿಭಿನ್ನ ಸಮಾಜಗಳಿಗೆ ಸಿಡ್ಕೊ ವ್ಯವಸ್ಥಾಪನದಿಂದ ಭೂಮಿ ಒದಗಿಸಿಕೊಡುವಲ್ಲಿ ಉತ್ತಮ ಕೆಲಸ ಮಾಡಿದ್ದು, ದೇವಾಡಿಗ ಸಮಾಜದ ಈ ಭವ್ಯ ವಾಸ್ತು ತುಂಬಾ ಸುಂದರವಾಗಿದೆ ಎಂದು ಪ್ರಶಂಸಿದರು. ಜೊತೆಯಲ್ಲಿ ಭಾರತೀಯ ಜನತಾ ಪಕ್ಷ ದಕ್ಷಿಣ ಭಾರತೀಯ ಮೋರ್ಚಾ ಇದು ದಕ್ಷಿಣಾತ್ಯರನ್ನು ಒಟ್ಟುಗೂಡಿಸುವಲ್ಲಿ ಉತ್ತಮ ಕೆಲಸ ಮಾಡುತ್ತಿದೆ ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ಈ ಸಂದರ್ಭದಲ್ಲಿ ಶ್ರೀ ಸಂಜೀವ್ ನಾಯ್ಕ್ ಇವರನ್ನು ಆಯೋಜಕರ ವತಿಯಿಂದ ಸತ್ಕರಿಸಲಾಯಿತು.

ಅಧ್ಯಕ್ಷಸ್ಥಾನ ವಹಿಸಿದ್ದ ದೇವಾಡಿಗ ಸಂಘ ಮುಂಬಯಿ ಇದರ ಅಧ್ಯಕ್ಷ ಶ್ರೀ ಪ್ರವೀಣ್ ಎನ್. ದೇವಾಡಿಗ ಮಾತನಾಡಿ, ರಕ್ತ ನಮ್ಮ ಶರೀರವನ್ನು ಸದ್ರಢವಾಗಿಡುವ ಕೆಲಸ ಮಾಡುತ್ತದೆ. ರಕ್ತವು ಶರೀರದ ಅಗತ್ಯವಾಗಿದ್ದು ನಮಲ್ಲಿ ಎಷ್ಟು ಧನ, ಧಾನ್ಯ, ಸಂಪತ್ತು ಇದ್ದರೂ ರಕ್ತದ ಅಗತ್ಯ ಯಾವಾಗಲೂ ಇರುತ್ತದೆ. ಆದುದರಿಂದ ಆದಷ್ಟು ಜನರು ರಕ್ತದಾನ ಮಾಡಿದರೆ ಉತ್ತಮ ಏಕೆಂದರೆ ಇದು ಅತಿ ಶ್ರೇಷ್ಠ ದಾನ ಎಂದು ಹೇಳಿದರು. ಅನೇಕ ಸಂಸ್ಥೆಗಳಲ್ಲಿ ಚರ್ಮ, ಶರೀರದ ಅಂಗಾಂಗಗಳನ್ನ ದಾನ ಮಾಡುತ್ತೇವೆ. ಆದರೆ ರಕ್ತದಾನ ಮಾಡುವುದು ಬಹಳ ಸುಲಭದ ಸೇವೆ ಮತ್ತು ಇನ್ನೊಬ್ಬರ ಪ್ರಾಣ ಉಳಿಸುವ ನಿಟ್ಟಿನಲ್ಲಿ ಉತ್ತಮ ಸೇವೆ" ಎಂದರು. ಈ ಕಾರ್ಯಕ್ರಮಕ್ಕೆ ಸಹಕರಿಸಿದ ಬಿ.ಜೆ.ಪಿ ಸೌತ್ ಇಂಡಿಯಾ ಸೆಲ್, ಮಹಾತ್ಮಾ ಗಾಂಧಿ ಮೆಮೋರಿಯಲ್ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಹಾಗೂ ಸಂಘದ ವ್ಯವಸ್ಥಾಪಕ ಮಂಡಳಿಗೆ ಈ ಶಿಬಿರದ ಆಯೋಜನೆಗೆ ಧನ್ಯವಾದ ನೀಡಿದರು.

ಈ ಸಂದರ್ಭದಲ್ಲಿ ಕೊಂಕಣ್ ವಿಭಾಗ ಮತ್ತು ಠಾಣೆ ಜಿಲ್ಲಾ ಬಿ.ಜೆ.ಪಿ ಸೌತ್ ಇಂಡಿಯಾ ಸೆಲ್ ಇದರ ಉಪಾಧ್ಯಕ್ಷರಾದ ಶ್ರೀ ಶಶಿ ದೋಮಧರನ್, ಉಪಾಧ್ಯಕ್ಷರಾದ ಶ್ರೀ ನಿತಿನ್ ಕಂಧಾರಿ, ದೇವಾಡಿಗ ಸಂಘ ಮುಂಬಯಿ ಇದರ ಯುವ ವಿಭಾಗದ ಕಾರ್ಯಾಧ್ಯಕ್ಷರಾದ ಶ್ರೀ ಬ್ರಿಜೇಶ್ ನಿಟ್ಟೇಕರ್ ಮೊದಲಾದವರು ಸಮಯೋಚಿತವಾಗಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ದೇವಾಡಿಗ ಸಂಘ ಮುಂಬಯಿ ಇದರ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ಬಿ. ದೇವಾಡಿಗ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಜಯಂತಿ ಎಂ. ದೇವಾಡಿಗ, ಜೊತೆ ಕಾರ್ಯದರ್ಶಿ ಶ್ರೀಮತಿ ಲತಾ ಆನಂದ್ ಸೇರಿಗಾರ, ಸಂಘದ ಮಾಜಿ ಅಧ್ಯಕ್ಷರುಗಳಾದ ಸರ್ವಶ್ರೀ ಹೆಚ್. ಮೋಹನ್ದಾಸ್, ರವಿ ಎಸ್. ದೇವಾಡಿಗ, ಶ್ರೀನಿವಾಸ್ ಪಿ. ಕರ್ಮರನ್, ಸಂಘದ ಜನಸಂಪರ್ಕ ವಿಭಾಗದ ಕಾರ್ಯಧ್ಯಕ್ಸರಾದ ಶ್ರೀ ಪ್ರಭಾಕಾರ ದೇವಾಡಿಗ, ನವಿ ಮುಂಬಯಿ ವಿಭಾಗದ ಕಾರ್ಯಾಧ್ಯಕ್ಷರು ಶ್ರೀ ರಮೇಶ್ ದೇವಾಡಿಗ, ಕಾರ್ಯದರ್ಶಿ ಶ್ರೀ ಸುರೇಶ ದೇವಾಡಿಗ ಬಾರಕೂರು, ಬಿ.ಜೆ.ಪಿ ಸೌತ್ ಇಂಡಿಯಾ ಸೆಲ್ ನವಿ ಮುಂಬಯಿ ಇದರ ಉಪಾಧ್ಯಕ್ಷರುಗಳಾದ ಶ್ರೀ ಜನಾರ್ಧನ್ ದೇವಾಡಿಗ, ಶ್ರೀ ಆನಂದ್ ಸನ್ಹೋತ್ರಾ, ಕೇರಳ ವಿಭಾಗ ಅಧ್ಯಕ್ಷಾದ ಶ್ರೀ ರವಿ ಕುಮಾರ್ ನಾಯರ್, ಬಿಜೆಪಿ ಕರ್ನಾಟಕ ವಿಭಾಗದ ಅಧ್ಯಕ್ಷರು ಶ್ರೀ ರಾಜಾರಾಮ್ ಆಚಾರ್ಯ, ಬಿಹಾರ್ ವಿಭಾಗದ ಅಧ್ಯಕ್ಷರಾದ ಶ್ರೀ ರಾಜಾರಾಮ್, ಉತ್ತರ ಭಾರತೀಯ ಬಿಜೆಪಿ ವಿಭಾಗದ ಅಧ್ಯಕ್ಷರಾದ ಶ್ರೀ ರಾಜೇಶ್ ರಾಯ್, ರಾಜಸ್ಥಾನ ಬಿಜೆಪಿ ವಿಭಾಗದ ಅಧ್ಯಕ್ಷರು ಶ್ರೀ ನರೇಶ್ ಪುರೋಹಿತ್ ಮುಂತಾದವರು ಸಕ್ರಿಯವಾಗಿ ಪಾಲ್ಗೊಂಡರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಅತಿಥಿಗಳನ್ನು ಗೌರವಿಸಲಾಯಿತು. ಮಹಾತ್ಮಾ ಗಾಂಧಿ ಮೆಮೋರಿಯಲ್ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಇದರ ಸಂಯೋಜಕರಾದ ಶ್ರೀಮತಿ ಶಾರದಾ ಅಂಚನ್, ಡಾ. ಕೃತಿಕಾ ಶುಕ್ಲ ಮತ್ತು ಸಿಬ್ಬಂದಿ ವರ್ಗದವರನ್ನೂ ಗೌರವಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಬಿ.ಜೆ.ಪಿ ಸೌತ್ ಇಂಡಿಯಾ ಸೆಲ್ ಇದರ ಅಧ್ಯಕ್ಷರಾದ ಶ್ರೀ ಹರೀಶ್ ಪೂಜಾರಿ ಇವರು ಮಾತನಾಡಿ ರಕ್ತದ ಅಗತ್ಯದ ಬಗ್ಗೆ ಚರ್ಚಿಸಿ ಈ ರಕ್ತ ದಾನ ಶಿಬಿರಕ್ಕೆ ಎಲ್ಲರ ಸಹಭಾಗಕ್ಕಾಗಿ ವಿಶೇಷವಾಗಿ ನವಿ ಮುಂಬಯಿಯ ಮಾಜಿ ಸಂಸದರಾದ ಶ್ರೀ ಸಂಜೀವ್ ಗಣೇಶ್ ನಾಯ್ಕ್ ಇವರಿಗೆ ಧನ್ಯವಾದವಿತ್ತರು. ಕಾರ್ಯಕ್ರಮದ ಸಂಜೋಜನೆ, ನಿರೂಪಣೆ ಮತ್ತು ಸ್ವಾಗತವನ್ನು ದೇವಾಡಿಗ ಸಂಘದ ಜೊತೆ ಕಾರ್ಯದರ್ಶಿ ನ್ಯಾಯವಾದಿ ಶ್ರೀ ಪ್ರಭಾಕರ್ ದೇವಾಡಿಗ ಇವರು ನೆರವೇರಿಸಿದರು.